ರಾಜ್ಯ ವಿಜ್ಞಾನ, ತಂತ್ರಜ್ಞಾನ ಪ್ರಶಸ್ತಿ ಪ್ರಕಟ

awardಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಡಾ.ಎ.ಎಸ್‌ಕಿರಣ್‌ ಕುಮಾರ್‌ ಸೇರಿ ನಾಲ್ವರು ವಿಜ್ಞಾನಿಗಳು ರಾಜ್ಯ ಸರ್ಕಾರ ನೀಡುವ ಸರ್.ಎಂ.ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಬೆಂಗಳೂರಿನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಗೌರವ ವಿಜ್ಞಾನಿ ಡಾ.ಮುನಿವೆಂಕಟಪ್ಪ ಸಂಜಪ್ಪ, ಭಾರತೀಯ ವಿಜ್ಞಾನ ಸಂಸ್ಥೆಯ ಮಾಲಿಕ್ಯುಲರ್‌ ಬಯೋಫಿಸಿಕ್ಸ್‌ ವಿಭಾಗದ ಪೊ.ಮತ್ತೂರು ಆರ್‌.ಎನ್‌.ಮೂರ್ತಿ ಹಾಗೂ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಪ್ರೊ.ಇಂದಿರಾ ಕರುಣಾಸಾಗರ್‌  ಅವರು ವಿಶ್ವೇಶ್ವರಯ್ಯ ಪ್ರಶಸ್ತಿಗೆ  ಆಯ್ಕೆ ಆದ ವಿಜ್ಞಾನಿಗಳು.

ಜೀವಿತಾವಧಿಯ ಸೇವೆಯನ್ನು ಪರಿಗಣಿಸಿ ನೀಡುವ ಈ ಪ್ರಶಸ್ತಿಯು ₹ 1 ಲಕ್ಷ ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

2013ನೇ ಸಾಲಿನ ಡಾ. ರಾಜಾರಾಮಣ್ಣ ವಿಜ್ಞಾನಿ ಪ್ರಶಸ್ತಿಗೆ ವಿಜಯಪುರದ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಶರೀರಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕುಸಾಲ್‌ ಕಾಂತಿದಾಸ್‌ ಹಾಗೂ 2014ನೇ ಸಾಲಿನ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಪ್ರಾಧ್ಯಾಪಕ ಡಾ.ಎನ್‌.ಬಿ.ರಾಮಚಂದ್ರ ಆಯ್ಕೆ ಆಗಿದ್ದಾರೆ. ಈ ಪ್ರಶಸ್ತಿಯು ₹ 75 ಸಾವಿರ ನಗದನ್ನು ಒಳಗೊಂಡಿದೆ.

ಸರ್‌.ಸಿ.ವಿ.ರಾಮನ್‌ ಯುವ ವಿಜ್ಞಾನಿ, ಪ್ರೊ.ಸತೀಶ್‌ ಧವನ್‌ ಯುವ ಎಂಜಿನಿಯರ್‌, ಡಾ,ಕಲ್ಪನಾ ಚಾವ್ಲಾ ಮಹಿಳಾ ಯುವವಿಜ್ಞಾನಿ ಪ್ರಶಸ್ತಿಯನ್ನೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ  ಪ್ರಕಟಿಸಿದೆ. ಈ ಪ್ರಶಸ್ತಿಗಳು ತಲಾ ₹ 50 ಸಾವಿರ ಮೊತ್ತವನ್ನು ಒಳಗೊಂಡಿವೆ. 

ಪ್ರೊ. ಸಿ. ಎನ್. ಆರ್. ರಾವ್ ಅಧ್ಯಕ್ಷತೆಯ ವಿಜ್ಞಾನಿಗಳ ಉನ್ನತ ಸಮಿತಿ  ಆಯ್ಕೆ  ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಇದೇ 30ರಂದು ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.